ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನ ಗಂಡು ಕಲೆಯೇ? ಮಹಿಳಾ ಯಕ್ಷಗಾನ ಸಾಧುವೇ ?

ಲೇಖಕರು :
ಕಡತೋಕಾ ಗೋಪಾಲಕೃಷ್ಣ ಭಾಗವತ
ಸೋಮವಾರ, ಆಗಸ್ಟ್ 31 , 2015

ಇತ್ತೀಚೆಗೆ ಜನರಂಜನೆಗೆಂದೇ ಪ್ರದರ್ಶಿತವಾಗುವ ಯಕ್ಷಗಾನಕ್ಕಿಂತಲೂ ಯಕ್ಷಗಾನದ ಬಗೆಗಿನ ವಿವಾದಗಳೇ ಹೆಚ್ಚು ಮನರಂಜನೆಯನ್ನು ಕೊಡುತ್ತಿರುವುದು ಸಂತೋಷ. ಅಲ್ಲಿ ಶೃಂಗಾರವಿದೆ, ಕರುಣವಿದೆ, ವೀರವಿದೆ, ಭೀಭತ್ಸ ಕೊನೆಗೆ ಭಯಾನಕವೇ ಮೊದಲಾದ ನವರಸಗಳೂ ಇವೆ. ಒಳ್ಳೆಯದೇ-ಬೌದ್ಧಿಕತೆಯ ಮಟ್ಟದಲ್ಲಿ ಮರಂಜನೆಯನ್ನು ಪಡೆಯುವಂತಾದರೆ ಅದಕ್ಕಿಂತಲೂ ಉತ್ತಮವಾದ ರಂಜನೆ ಬೇರೆ ಯಾವುದಾಗಿರಲು ಸಾಧ್ಯ? ಇರಲಿ.

ವೃತ್ತಿಪರ ಮೇಳಗಳಲ್ಲಿ ದುಡಿದ ಪ್ರಥಮ ಮಹಿಳಾ ಕಲಾವಿದೆ ಶ್ರೀಮತಿ ಲೀಲಾವತಿ ಬೈಪಡಿತ್ತಾಯ
'ಯಕ್ಷಗಾನವು ಗಂಡುಕಲೆ'ಯೆಂಬ ಮಾತು ಜನಸಾಮಾನ್ಯರು ತಮಗೆ ಅನಿಸಿದಂತೆ ಈ ಕಲೆಯ ಸ್ವರೂಪವನ್ನು ಗುರುತಿಸುವಾಗ ಹೇಳಿದ ಮಾತೇ ಹೊರತೂ ಯಾವುದೇ ಶಾಸ್ತ್ರ ಗ್ರಂಥದಲ್ಲಾಗಲೀ ಅಧಿಕೃತವಾಗಿ ಬಂದದ್ದಲ್ಲ. ಇಲ್ಲಿ 'ಗಂಡು' ಎಂಬ ಪದ ಆಡು ಭಾಷೆಯಲ್ಲಿ ಮತ್ತು ಗ್ರಂಥಸ್ಥ ಭಾಷೆಯಲ್ಲಿ 'ಗಂಡಸು' 'ಪುರುಷ' ಎಂಬ ಅರ್ಥದಲ್ಲಿ ಅಷ್ಟೇ ಅಲ್ಲದೇ ಇನ್ನೂ ಕೆಲವು ಅರ್ಥದಲ್ಲಿಯೂ ಬಳಕೆಯಾಗುವುದಿದೆ. ಇಂಗ್ಲಿಷ್ನ ಮಸ್ಕ್ಯುಲಾಯಿನ್ ಎಂಬ ಪದಕ್ಕೆ ಸಮಾನಾರ್ಥಕವಾಗಿ ಕೂಡ ಇದು ಬಳಕೆಯಾಗುವುದಿದೆ. 'ಗಟ್ಟಿಯಾದದ್ದು', 'ಪ್ರಮುಖ' ಎಂಬ ಅರ್ಥದಲ್ಲಿಯೂ ಬಳಕೆಯಾಗುವುದಿದೆ. ಅಂದರೆ ಸೂಕ್ಷ್ಮವಾದ 'ಲಾಸ್ಯ'ಕ್ಕಿಂತ ಪುರುಷ ಸಹಜವಾದ 'ತಾಂಡವ'ಕ್ಕೆ ಇಲ್ಲಿ ಹೆಚ್ಚು ಅವಕಾಶವಿದೆ ಎಂದು ಅರ್ಥ. ಇದು 'ಹೆಣ್ಣು' ಎನ್ನುವುದಕ್ಕೆ ವಿರುದ್ಧವಾದ ಅರ್ಥದಲ್ಲಿ ಬಳಕೆಯಾದದ್ದಲ್ಲ. ಇಲ್ಲವಾದರೆ ಎಲ್ಲಿಯಾದರೂ ಒಂದು ಕಡೆ 'ಹೆಣ್ಣು ಕಲೆ' ಎಂಬುದೂ ಇರಬೇಕಾಗಿತ್ತು.

ಸಾಮಾನ್ಯವಾಗಿ ಗಂಡಸರೇ ತೊಡಗಿಕೊಂಡಿರುವುದರಿಂದ ಈ ಮಾತೂ ಬಂದಿರಬಹುದು. ಗಂಡಸರು ಮಾತ್ರ ಭಾಗವಹಿಸಬೇಕಾದ ಕಲೆಯಾದ್ದರಿಂದಲೇ 'ಗಂಡು ಕಲೆ'ಯೆಂದು ಕರೆಯುತ್ತಿದ್ದರು ಎಂದಿಟ್ಟುಕೊಳ್ಳೊಣ-ವಾದಕ್ಕಾಗಿ. ಹಾಗಿದ್ದರೆ ಯಕ್ಷಗಾನವನ್ನು 'ದಶಾವತಾರ' ಎಂದು ಕೂಡ ಕರೆಯುತ್ತಾರೆ ಆದರೆ ಇಲ್ಲಿ ವಿಷ್ಣುವಿನ ಹತ್ತು ಅವತಾರಕ್ಕೆ ಹೊರತಾದ ಶಿವನಿಗೆ ಸಂಬಂಧಿಸಿದ ಅಥವಾ ದೇವಿಗೆ ಸಂಬಂಧಿಸಿದ ಅಥವಾ ಇತರ ಕಾಲ್ಪನಿಕ ಪ್ರಸಂಗಗಳನ್ನೂ ಆಡುತ್ತಾರಲ್ಲ- ದಶಾವತಾರ ಎಂದರೆ ದಶಾವತಾರದ ಕಥೆಯನ್ನು ಮಾತ್ರ ಪ್ರದರ್ಶಿಸಬೇಡವೆ.

ಹೀಗೆ ಕಲೆಯೊಂದನ್ನು ಯಾವ್ಯಾವುದೋ ಕಾರಣಕ್ಕಾಗಿ ಬೇರೆ ಬೇರೆ ಹೆಸರಿನಿಂದ ಕರೆದಿರಬಹುದು. ಹೆಚ್ಚೇಕೆ 'ಯಕ್ಷಗಾನ' ಎಂಬ ಇದರ ಹೆಸರಿನ ಮೊದಲ ಭಾಗ 'ಯಕ್ಷ'ದ ಅರ್ಥವೇ 'ಯಕ್ಷ'- 'ಪೂಜಾಯಾಂ' ಅಂದರೆ ಪೂಜೆ ಅಥವಾ ಆರಾಧನೆ ಎಂದು ಆಗಿದೆ. ಆರಾಧನೆಗಾಗಿ ಮಾತ್ರ ಇದ್ದ ಈ ಕಲೆಯಲ್ಲಿ ಟಿಕೆಟ್ ಪ್ರದರ್ಶನ ಮಾಡುವುದು ಸರಿಯೆ? ತಮಿಳುನಾಡಿನ ಮೇಲತ್ತ್ತೂರು ಭಾಗವತ ಮೇಳದವರು ಪ್ರಹಲ್ಲಾದ ಚರಿತ್ರೆ ಪ್ರಸಂಗವನ್ನು ಮೇಲತ್ತೂರಿನ ನರಸಿಂಹ ದೇವಾಲಯದಲ್ಲಿ ನರಸಿಂಹ ಜಯಂತಿಯ ದಿನ ಮಾತ್ರ ಪ್ರದರ್ಶಿಸುತ್ತಾರೆ-ಕೋಟಿ ರೂಪಾಯಿ ಸಂಭಾವನೆ ನೀಡಿದರೂ ಉಳಿದ ದಿನ ಆ ಕಥೆಯ ಪ್ರದರ್ಶನವನ್ನು ಅವರು ಮಾಡುವುದಿಲ್ಲ.

ಆದರೆ ಯಕ್ಷಗಾನದಲ್ಲಿ ದೇವೀಮಹಾತ್ಮೆಯಂಥ ಪ್ರಸಂಗವನ್ನೂ ಟಿಕೆಟ್ ಆಟ ಆಡಲು ಪ್ರಾರಂಭಿಸಿ ಬಹಳ ಕಾಲವಾಯಿತು. ಇಷ್ಟಕ್ಕೂ ಭಾರತದಲ್ಲಿ ಯಕ್ಷಗಾನವೊಂದೇ ಆರಾಧನಾ ಕಲೆಯಲ್ಲ. ಭಾರತೀಯ ರಂಗಕಲೆಗಳೆಲ್ಲವೂ ದೇವರ ಪ್ರೀತ್ಯರ್ಥವಾಗಿ ಪ್ರಾರಂಭವಾದ ಆರಾಧನಾ ಕಲೆಗಳೇ ಆಗಿದ್ದವು ಆದರೆ ಕ್ರಮೇಣ ಅವು ಆರಾಧನೆಯೊಂದಿಗೆ ಮನರಂಜನೆಯ ಕಲೆಯೂ ಆಗಿ ರೂಪಾಂತರ ಹೊಂದಿದವು-ಇದೇನೂ ಒಂದು ವಿಘಟನಾತ್ಮಕ ಬೆಳವಣಿಗೆಯಲ್ಲ.

'ಆರಭಟಿ' ಎಂಬ ಕಲೆಯೇ ಯಕ್ಷಗಾನವೇ?

ಇನ್ನು ಕೆಲವರು, ಭರತ ಮುನಿಯು ಶಿವನನ್ನು ತಪಸ್ಸಿನಿಂದ ಒಲಿಸಿಕೊಂಡು ತಂದ 'ಆರಭಟಿ' ಎಂಬ ಕಲೆಯೇ ಯಕ್ಷಗಾನ ಎಂದು ಹೇಳಿದ್ದಾರೆ. ಇದು ಭರತನ ನಾಟ್ಯಶಾಸ್ತ್ರದಲ್ಲಿಯೇ 'ಯಕ್ಷಗಾನ' ಎಂಬ ಕಲೆಯ ಉಲ್ಲೇಖವಿದೆ ಎಂಬ ತಪ್ಪು ಕಲ್ಪನೆ ಮೂಡುತ್ತದೆ. ವಾಸ್ತವವಾಗಿ 'ಯಕ್ಷಗಾನ' ಎಂಬ ಶಬ್ದಕ್ಕೆ ನಾಲ್ಕು ಶತಮಾನಕ್ಕಿಂತ ಹೆಚ್ಚಿನ ಇತಿಹಾಸವಿಲ್ಲ. ಭರತನು ನಾಟ್ಯಶಾಸ್ತ್ರವನ್ನು ಬರೆದು ಸುಮಾರು 2000 ವರ್ಷಗಳೇ ಸಂದುಹೋದವು. 'ಯಕ್ಷಗಾನ' ಎಂಬುದು ಸಂಸ್ಕೃತ ಶಬ್ದವಾದರೂ ವಿಸ್ತಾರವಾದ ಸಂಸ್ಕೃತ ವಾಙ್ಮಯದಲ್ಲಿ ಎಲ್ಲಿಯೂ ಈ ಶಬ್ದದ ಉಲ್ಲೇಖವಿಲ್ಲ. ಅದು ಬರುವುದು 17ನೇ ಶತಮಾನದ ಕೃತಿಯೊಂದರಲ್ಲಿ. ಅದಕ್ಕಿಂತ ಹಿಂದೆ 'ಯಕ್ಷಗಾನ' ಎಂಬ ಶಬ್ದವನ್ನು ಸಂಸ್ಕೃತದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲವೆಂದು ಈಗಾಗಲೇ ಹಲವು ಸಂಶೋಧನೆಯಿಂದ ದೃಢಪಟ್ಟಿದೆ. ಕ್ರಿ.ಶಕ.16-17ನೇ ಶತಮಾನದಲ್ಲಿ ತಂಜಾವೂರನ್ನಾಳಿದ ರಘುನಾಥ ನಾಯಕನ ಆಸ್ಥಾನ ವಿದ್ವಾಂಸನಾಗಿದ್ದ ಗೊವಿಂದ ದೀಕ್ಷಿತನು ತನ್ನ 'ಸಂಗೀತಸುಧಾ' ಎಂಬ ಶಾಸ್ತ್ರಗ್ರಂಥದಲ್ಲಿ ರಘುನಾಥ ನಾಯಕನ ಗ್ರಂಥರಚನೆಗಳನ್ನು ಹೊಗಳುತ್ತಾ ಈ ಕೆಳಗಿನಂತೆ ಹೇಳುತ್ತಾನೆ:

ಬೆ೦ಗಳೂರಿನ ಯುವ ಪ್ರತಿಭೆ, ಈಗಾಗಲೆ ೩ ಸಾಮಜಿಕ ಪ್ರಸ೦ಗಗಳನ್ನು ರಚಿಸಿರುವ ಕುಮಾರಿ ಅರ್ಪಿತಾ ಹೆಗ್ಡೆ
ಶ್ರೀರುಕ್ಮಿಣೀಕೃಷ್ಣವಿವಾಹ ಯಕ್ಷಗಾನಂ, ಪ್ರಬಂಧಾನಪಿ ನೈಕಭೇದಾನ್ |

ನಿರ್ಮಾಯ ವಾಗ್ಭಿಃ ಪ್ರಣುತಾರ್ಥಭಾಗ್ಭಿರ್ವಿದ್ವತ್ ಕವೀನಾಂ ವಿದಧಾಸಿ ಹರ್ಷಂ ||

ಇಲ್ಲಿ ಬರುವ 'ಯಕ್ಷಗಾನ' ಎಂಬುದೇ ಇಡಿಯ ಭಾರತದ ಇತಿಹಾಸದಲ್ಲಿ ಬರುವ 'ಯಕ್ಷಗಾನ' ಎಂಬ ಶಬ್ದದ ಪ್ರಪ್ರಥಮ ಉಲ್ಲೇಖ. ಹೀಗಿರುವಾಗ 2000 ವರ್ಷಗಳ ಹಿಂದೆ ಭರತಮುನಿ ಯಕ್ಷಗಾನವನ್ನು ಹೇಗೆ ತಂದ? ಭರತನ 'ನಾಟ್ಯಶಾಸ್ತ್ರ'ದಲ್ಲಿ, ಇಂದು ಅಸ್ತಿತ್ವದಲ್ಲಿರುವ ಭರತನಾಟ್ಯ, ಕೂಚಿಪುಡಿ, ಕಥಕ್, ಓಡಿಶಿ, ಕಥಕ್ಕಳಿ, ಮಣಿಪುರಿ, ಯಕ್ಷಗಾನ ಮೊದಲಾದ ಯಾವ ಕಲಾ ಪ್ರಕಾರಗಳ ಉಲ್ಲೇಖವೂ ಇಲ್ಲ. ನಾಟ್ಯಶಾಸ್ತ್ರದಲ್ಲಿ ಉಲ್ಲೇಖಿತವಾದ ದೇಶೀ ಕಲಾ ಪ್ರಕಾರಗಳಾದ 'ದಶರೂಪಕ' ಗಳ ಸಂದರ್ಭದಲ್ಲಿ ಅವನು ಕೊಟ್ಟ ಲಕ್ಷಣಗಳನ್ನು ನೋಡಿ ಸಂಶೋಧಕ ತಜ್ಞರನೇಕರು ಅವುಗಳಲ್ಲಿ ಒಂದು ಭರತ ಮುನಿಯ ಕಾಲದಲ್ಲಿ ಪ್ರಚಲಿತವಿದ್ದ ಯಕ್ಷಗಾನವನ್ನು ಹೋಲುವ ಕಲೆಯಾಗಿರಬಹುದು ಎಂದು ತರ್ಕಿಸಿದ್ದಾರೆ ಅಷ್ಟೇ. ಆದರೆ ಈ ಎಲ್ಲ ಕಲೆಗಳೂ ನಾಟ್ಯಶಾಸ್ತ್ರದಲ್ಲಿ ಪ್ರತಿಪಾದಿತವಾದ ಮೂಲತತ್ತ್ವವನ್ನೇ ಆಧಾರವಾಗಿಟ್ಟುಕೊಂಡು ಬೆಳೆದುಬಂದಿವೆ ಎಂಬುದು ಮಾತ್ರ ಸತ್ಯ. ಶೃಂಗಾರ ಮೊದಲಾದ ನವರಸಗಳ ಪರಿಕಲ್ಪನೆಯ ಮೂಲ ಭರತ ಮುನಿಯು ಬರೆದ ನಾಟ್ಯಶಾಸ್ತ್ರ ಮತ್ತು ಇಂದಿಗೂ ನಮ್ಮ ದೇಶದ ಸಿನಿಮಾದಂಥ ಆಧುನಿಕ ಕಲೆಗಳಿಗೂ ಮೂಲ ಉದ್ದೇಶ ನವರಸಗಳ ಸೃಷ್ಟಿಯೇ ಆಗಿರುವುದು ಗಮನಾರ್ಹ.

ಇನ್ನು 'ಆರಭಟಿ' ಎಂಬುದು ಒಂದು ಕಲೆಯೇ ಅಲ್ಲ. ಭಾರತೀಯ ನಾಟ್ಯ ನಾಟಕಗಳ ಕುರಿತ ಅತ್ಯಂತ ಪ್ರಾಚೀನ ಶಾಸ್ತ್ರ ಗ್ರಂಥ ಭರತಮುನಿಯು ಬರೆದನೆಂದು ಹೇಳಲಾಗುವ 'ನಾಟ್ಯಶಾಸ್ತ್ರ'. ಈ ನಾಟ್ಯಶಾಸ್ತ್ರದಲ್ಲಿ ಪ್ರತ್ಯೇಕ ಅಧ್ಯಾಯವನ್ನು ಮಾಡಿ ಭರತನು 'ವೃತ್ತಿ'ಗಳ ಕುರಿತು ಹೇಳುತ್ತಾನೆ. ಅವನ ಪ್ರಕಾರ ನಾಲ್ಕು ರೀತಿಯ ವೃತ್ತಿಗಳಿವೆ 1. ಕೈಶಿಕಿ, 2. ಸಾತ್ವತಿ, 3. ಭಾರತಿ ಮತ್ತು 4.ಆರಭಟಿ.

ಇಲ್ಲಿ ವೃತ್ತಿಯೆಂದರೆ 'ವಕೀಲಿ ವೃತ್ತಿ' 'ವೈದ್ಯಕೀಯ ವೃತ್ತಿ' ಎಂಬ ಅರ್ಥದಲ್ಲಿ ಅದನ್ನು ಪ್ರಯೋಗಿಸಿಲ್ಲ. ನಾಟ್ಯ ಅಥವಾ ನಾಟಕದ ಒಟ್ಟೂ ಶೈಲಿಯನ್ನು ನಾಲ್ಕು ವೃತ್ತಿಯಲ್ಲಿ ವಿಭಾಗಿಸಿದ್ದಾನೆ. ಭಾರತೀ ವೃತ್ತಿಯಲ್ಲಿ ಮಾತಿಗೆ ಅಥವಾ ಭಾಷೆಗೆ ವಿಶೇಷವಾದ ಮಹತ್ವವಿದೆ. ಸಾತ್ವತಿ ವೃತ್ತಿಯು ಭಾವಪ್ರಧಾನವಾದುದು ಮತ್ತು ಕೈಶಿಕಿ ಮತ್ತು ಆರಭಟಿ ವೃತ್ತಿಯು ಆಂಗಿಕಾಭಿನಯ ಪ್ರಧಾನವಾದುದು. ಇದರಲ್ಲಿಯೂ ಆರಭಟಿ ವೃತ್ತಿಯಲ್ಲಿ ಏರು ಧ್ವನಿಯಲ್ಲಿ ಕೂಗುವುದು, ಜಿಗಿದು ಹಾರುವುದು ಇವೆಲ್ಲ ಇರುವುದೆಂದು ನಾಟ್ಯಶಾಸ್ತ್ರದಲ್ಲಿ ಹೇಳಿದೆ. ಆ ಕಾರಣದಿಂದ ಯಕ್ಷಗಾನದಲ್ಲಿ ಆರಭಟಿ ವೃತ್ತಿಯು ಪ್ರಧಾನವಾಗಿದೆ ಎಂದು ಹೇಳಬಹುದೇ ಹೊರತೂ ಆರಭಟೀ ವೃತ್ತಿಯನ್ನು ಕೇವಲ ಪುರುಷರೇ ಮಾಡಬೇಕೆಂದೂ ಸ್ತ್ರೀಯರು ಮಾಡಬಾರದೆಂದೂ ನಾಟ್ಯಶಾಸ್ತ್ರಕಾರನಾಗಲೀ ಉಳಿದ ಶಾಸ್ತ್ರಕಾರರಾಗಲೀ ಎಲ್ಲಿಯೂ ಹೇಳಿಲ್ಲ.

ಆರಭಟಿಯಿರಲಿ, ಕೈಶಿಕಿಯಿರಲಿ ಅವು ಕಲೆಗಳನ್ನು ವರ್ಗೀಕರಿಸುವುದಕ್ಕಾಗಿ ರೂಪಿಸಲ್ಪಟ್ಟ ತತ್ತ್ವಗಳಲ್ಲ. ಈ ಕಾರಣಕ್ಕಾಗಿಯೇ ಸ್ತ್ರೀಯರಿಗಾಗಿ ಕೈಶಿಕಿ, ಸಾತ್ವತಿ ಮತ್ತು ಬಾರತೀ ವೃತ್ತಿಗಳಿವೆ ಎಂಬ ಮಾತು ಆಧಾರವಿಲ್ಲದ್ದು ಮತ್ತು ನಾಟ್ಯಶಾಸ್ತ್ರದಲ್ಲಿ ಉಲ್ಲೇಖಿತವಾದ ವೃತ್ತಿಗಳನ್ನು ಕಲೆಯೆಂದು ತಪ್ಪು ತಿಳಿದ ದೆಸೆಯಿಂದ ಮೂಡಿಬಂದ ತಪ್ಪು ಅಬಿಪ್ರಾಯವಾಗಿದೆ. (ಗ್ರಂಥ ಋಣ: ನೋಡಿ -Dr.G.S.Hegde’s –Book entitled ‘Sanskrit Sources of Yakshagana’)

ದೂರದರ್ಶನ ಧಾರವಾಹಿಗಳ ನಟಿಯೂ ಆಗಿರುವ ಬೆ೦ಗಳೂರಿನ ಯುವ ಪ್ರತಿಭೆ ನಾಗಶ್ರೀ ಶಾಸ್ತ್ರಿ
ಪ್ರಾಚೀನ ಕಾಲದವನಾದ ಭರತಮುನಿಯು ನಾಟ್ಯಶಾಸ್ತ್ರವನ್ನು ಬರೆದ ಮೇಲೆ ಸಾವಿರಾರು ವರ್ಷಗಳಲ್ಲಿ ಯಕ್ಷಗಾನವೊಂದೇ ಅಲ್ಲ ಇಡಿಯ ಭಾರತದ ಎಲ್ಲ ಕಲಾ ಪ್ರಕಾರಗಳೂ ಅನೇಕ ಸ್ಥಿತ್ಯಂತರಗಳೊಂದಿಗೆ ಬೆಳೆದು ಬಂದಿವೆ. ಸಾವಿರ ವರ್ಷಗಳ ಹಿಂದೆ ನಾಟ್ಯ ಶಾಸ್ತ್ರವನ್ನು ಬರೆಯುವಾಗ ಭರತ ಮುನಿಯು ನಾಟಕ, ನಾಟ್ಯಗಳ ಸಂಬಂಧದಲ್ಲಿ ಹಲವು ವಿಧಿ-ನಿಷೇಧಗಳನ್ನು ಹೇರುತ್ತಾ ಹೋಗುತ್ತಾನೆ. ಇಂತಿರುವಾಗ ಸ್ತ್ರೀಯರು ಆರಭಟಿ ಸ್ವರೂಪದ ಕಲೆಗಳಲ್ಲಿ ಭಾಗವಹಿಸಬಾರದು ಅಂತಿದ್ದರೆ ಅವನಿಗೆ ಅವರ ಭಾಗವಹಿಸುವಿಕೆಯನ್ನು ಸ್ಪಷ್ಟವಾಗಿ ನಿಷೇಧಿಸುವುದಕ್ಕೆ ಯಾವ ತೊಂದರೆಯೂ ಇರಲಿಲ್ಲ.

ಖಳ ನಾಯಕಪಾತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲವೇ?

ರಂಗಸ್ಥಳದಲ್ಲಿ ಅಮಂಗಳವಾದ ಸಾವಿನ ದೃಶ್ಯವನ್ನು ತೋರಿಸಬಾರದು ಎಂಬುದೂ ಅಂತಹ ನಿಷೇಧಗಳಲ್ಲಿ ಒಂದು ಆದರೆ ಯಕ್ಷಗಾನದಲ್ಲಿ ಸಾವಿನ ದೃಷ್ಯಗಳನ್ನು ತೋರಿಸುತ್ತಾರಲ್ಲ? ಒಂದೊಮ್ಮೆ ಮಹಿಳೆಯರಿಗೆ ನಿಷೇಧವನ್ನು ಭರತಮುನಿಯ ಶ್ಲೋಕಗಳನ್ನು ವಿಶ್ಲೇಷಿಸಿ ತರ್ಕಿಸಲು ಸಾಧ್ಯವಿದೆ ಅಂತಿಟ್ಟುಕೊಳ್ಳೋಣ. ನಮ್ಮ ದೇಶದ ಹಿಂದುಗಳಿಗೆ ಪವಿತ್ರವೆಂದು ಹೇಳಲಾಗುವ ಮನುಸ್ಮೃತಿಯಲ್ಲಿ ಹೇಳಿದ 'ನಸ್ತ್ರೀ ಸ್ವಾಂತ್ರ್ಯಮರ್ಹಸಿ'(ಮಹಿಳೆಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ) ಎಂಬ ನಿಷೇಧವನ್ನು ಅಲಕ್ಷಿಸಿ ಸ್ತ್ರೀಯರಿಗೆ ಸಮಾನ ಹಕ್ಕನ್ನು ನಾವು ಕೊಟ್ಟಿದ್ದೇವೆ. ಹೆಚ್ಚು ಪವಿತ್ರವಾದ ಮನುಸ್ಮೃತಿಯನ್ನೇ ನಾವು ನಿರ್ಲಕ್ಷಿಸಿದ್ದೇವೆ ಅಂತಾದರೆ ಅಷ್ಟು ಶಿರೋಧಾರ್ಯವಲ್ಲದ ನಾಟ್ಯಶಾಸ್ತ್ರದ ನಿಷೇಧವೊಂದನ್ನು ಸ್ತ್ರೀಯರ ಸಮಾನ ಹಕ್ಕುಗಳನ್ನು ಗೌರವಿಸುವುದಕ್ಕಾಗಿ ಅಲಕ್ಷಿಸಿದರೆ ತಪ್ಪೇನೂ ಇಲ್ಲ.

``ಮಹಿಳೆಯರಿಂದ ಖಳ ನಾಯಕಪಾತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ; ಅವರಿಗೆ ಮಾತನಾಡಲು ಬರುವುದಿಲ್ಲ, ಹೀಗೆಯೇ ಮುಂದುವರಿದರೆ ಯಕ್ಷಗಾನವು ನಾಟಕದ ಕಂಪನಿಯಾಗುತ್ತದೆ' `` ಎ೦ಬುದು, ಮಹಿಳೆಯರ ವೇಷದ ಬಗ್ಗೆ ಇನ್ನೊ೦ದು ಆಕ್ಷೇಪ. ಖಳ ನಾಯಕ ಪಾತ್ರದ ಕುರಿತು ಹೇಳುವುದಾದರೆ ಆ ಆಕ್ಷೇಪಗಳನ್ನು ಪುರುಷ ವೇಷಧಾರಿಗಳಿಗೂ ನಾವು ಅನ್ವಯಿಸಬಹುದು. ಸ್ವರಭಾರವಿಲ್ಲದ ಹಲವು ವೇಷಧಾರಿಗಳು 50 ದಾಟಿದ ಮೇಲೂ ಕೇದಗೆ ಮುಂದಲೆ ವೇಷವನ್ನೇ ಮಾಡುತ್ತಿಲ್ಲವೇ?

ನಾಯಕ, ಪ್ರತಿನಾಯಕ, ಖಳ ಎಲ್ಲ ರೀತಿಯ ಪಾತ್ರಗಳಿಗೂ ಅನುಕೂಲವಾದ ಶರೀರ ಮತ್ತು ಶಾರೀರ ಚಿಟ್ಟಾಣಿ, ಮಹಾಬಲ ಹೆಗಡೆಯವರಂಥ ಕೆಲವೇ ಕಲಾವಿದರಿಗೆ ಮಾತ್ರ ಇದೆ. ನಮ್ಮಲ್ಲಿರುವ ಪುರುಷ ವೇಷಧಾರಿಗಳಲ್ಲಿ ಹಲವರು ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸುವುದಕ್ಕೆ ಅಗತ್ಯವಾದ ಕಂಠಶ್ರೀ ಮತ್ತು ದೇಹವನ್ನು ಹೊಂದಿಲ್ಲ. ಇದು ನೈಸರ್ಗಿಕವಾಗಿ ಇರುವ ಒಂದು ಕೊರತೆ ಮತ್ತು ವರದಾನ. ಆದರೂ ಮಹಿಳೆಯರಲ್ಲಿ ಮಯೂರಿ ಉಪಾಧ್ಯರಂಥ ಕಲಾವಿದರು ಖಳ ಪಾತ್ರದ ವೇಷತೊಟ್ಟುಬಂದರೆ ಇವಳು ಮಹಿಳೆಯೇ ಎಂಬ ಅನುಮಾನ ಬರುತ್ತದೆ. ಕಂಠವಾಗಲೀ ದೇಹವಾಗಲೀ ಖಳ ಪಾತ್ರಕ್ಕೆ ಸಾಲದೆನಿಸುವುದಿಲ್ಲ.

ತೆ೦ಕು ತಿಟ್ಟಿನಲ್ಲಿ ಭಾಗವತಿಕೆಯಲ್ಲಿ ಮಿ೦ಚುತ್ತಿರುವ ಭವ್ಯಶ್ರೀ ರೈ, ಮ೦ಡೆಕೋಲು
ನಿಜ. ಪುರುಷರಿಗೆ ಹೋಲಿಸಿದರೆ ಮಹಿಳಾ ಕಲಾವಿದರಲ್ಲಿ ಕೊರತೆಯಿದೆ. ಆದರೆ ಮಹಿಳೆಯರಿಗೆ ನಾವು ಕಾಲಾವಕಾಶವನ್ನೂ ಕೊಡಬೇಕಾಗುತ್ತದೆ. ಮಹಿಳೆಯರು ಉತ್ಸಾಹದಿಂದ ವೇಷಮಾಡುವುದಕ್ಕೆ ಪ್ರಾರಂಭಿಸಿ ಬಹಳ ಕಾಲವೇನೂ ಆಗಲಿಲ್ಲ. ಕಳೆದ ಐದೇಐದು ವರ್ಷಗಳಿಂದ ಮಾತ್ರ ಸ್ತ್ರೀಯರು ಯಕ್ಷಗಾನದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹಿಳೆಯರ ಸಮಸ್ಯೆಗಳು, ಕೊರತೆಗಳು ನೀಗಲು ಇನ್ನೂ ಕಾಲಾವಕಾಶ ಬೇಕು. ಪುರುಷ ಕಲಾವಿದರೇನು ಒಂದೇ ರಾತ್ರಿಯ ಆಟದಲ್ಲಿ ಪ್ರಬುದ್ಧ ಕಲಾವಿದರಾಗಿ ಹೊರಹೊಮ್ಮಿದ್ದಾರೆಯೆ? ಇಷ್ಟಾದರೂ ಸೌಮ್ಯ ಗೋಟಗಾರು, ಗೀತಾ ಹೆಗಡೆ, ಕಿರಣ ಪೈ ಮೊದಲಾದ ಕೆಲವು ಮಹಿಳೆಯರ ಕಲಾ ಪ್ರಸ್ತುತಿಯು ಅವರ ಸಮಾನ ವಯಸ್ಸಿನ ಪುರುಷ ವೇಷಧಾರಿಗಳಿಗೆ ಯಾವ ದೃಷ್ಟಿಯಿಂದಲೂ ಕಡಿಮೆ ಇರುವುದಿಲ್ಲ ಎಂಬುದನ್ನು ಪ್ರಾಯೋಗಿಕವಾಗಿ ನಿರೂಪಿಸಬಲ್ಲರು.

ನಮ್ಮ ಕರ್ಮಠ ಸಾಮಾಜಿಕ ವ್ಯವಸ್ಥೆಯ ಕಾರಣದಿಂದ ಮತ್ತು ಇತರ ಕೌಟುಂಬಿಕ ಕಾರಣಗಳಿಂದ ಗಂಡಸರಂತೆ ಎಲ್ಲೆಂದರಲ್ಲಿ ಹೋಗಿ ವೇಷಮಾಡಿ ಅನುಭವ ಗಳಿಸುವ ಅನುಕೂಲತೆ ಮಹಿಳೆಯರಿಗೆ ಇರುವುದಿಲ್ಲ. ಪುರುಷರು ನಾಲ್ಕು ವರ್ಷದಲ್ಲಿ ಗಳಿಸಬಹುದಾದ ಅನುಭವವನ್ನು ಗಂಡ-ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ಹೊತ್ತ ಮಹಿಳೆ ಹತ್ತು ವರ್ಷಗಳಲ್ಲಿ ಮಾತ್ರ ಗಳಿಸಿಕೊಳ್ಳಬಲ್ಲಳು. ಇದೆಲ್ಲವನ್ನು ಗಮನಿಸಿ ಮಹಿಳೆಯರಿಗೆ ನಾವು ಹೆಚ್ಚು ಕಾಲಾವಕಾಶವನ್ನು ಕೊಡುವ ಅಗತ್ಯವಿದೆ.

ಮಹಿಳೆಯರ ಯಕ್ಷಗಾನದ ಕುರಿತು ಸಾಮಾನ್ಯವಾಗಿ ಕೇಳಿಬರುವ ಆಕ್ಷೇಪವೆಂದರೆ ಅವರ ಮಾತು ಶೃತಿಗೆ ಕೂಡುವುದಿಲ್ಲ ಎಂದು. ವಾಸ್ತವವಾಗಿ ಯಕ್ಷಗಾನದಲ್ಲಿ ಮಾತು 'ಶೃತಿಗೆ ಕೂಡುವುದು' ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಶೃತಿಬದ್ಧವಾಗಿ ಮಾತನಾಡುವುದೆಂದರೆ ಭಾಗವತರ ಶೃತಿಯ ಷಡ್ಜಕ್ಕೆ ಧ್ವನಿಗೂಡಿಸುವುದು ಮಾತ್ರವಲ್ಲ. ಯಾವುದೇ ಶೃತಿಯಲ್ಲಿದ್ದರೂ ಶೃತಿಗೆ ಹೊಂದಿಸಿ ಮಾತನಾಡಲು ಸಾಧ್ಯವಿದೆ-ಆದರೆ ಅದಕ್ಕೆ ಹೆಚ್ಚಿನ ಮಾರ್ಗದರ್ಶನ ಮತ್ತು ಸಂಯಮದ ಪ್ರಯತ್ನ ಬೇಕಾಗಿದೆ. ಯಕ್ಷಗಾನ ಕಲಿಯುವಾಗ ನಮ್ಮ ಯಕ್ಷಗುರುಗಳುಗಳು ಕುಣಿತಕ್ಕೆ ಕೊಟ್ಟ ಮಹತ್ವವನ್ನು ಉಳಿದ ಅಂಗಗಳಿಗೆ ಕೊಡುವುದಿಲ್ಲ. ಮಹಿಳಾ ಕಲಾವಿದರೂ ಮಾತನ್ನು ನಿರ್ಲಕ್ಷಿಸುವುದು ಸಾಮಾನ್ಯ. ಮಹಿಳೆಯರು ಮಾತಿಗೆ ಇರುವ ಮಹತ್ವವನ್ನು ಮನಗಂಡರೆ ಈ ಸಮಸ್ಯೆಗೆ ಪರಿಹಾರವು ಸಾಧ್ಯ. ಇಂದಿನ ಯಕ್ಷಗಾನದ ವೃತ್ತಿ ಮೇಳದ ಪ್ರಯೋಗಳನ್ನು ನೋಡಿದರೆ-ಅಲ್ಲಿಯ ಸಿನಿಮೀಯ ನೃತ್ಯ, ಬಾಲಿಶ ಅಭಿನಯ, ಅನೌಚಿತ್ಯಪೂರ್ಣ ಮಾತು, ಅಯಕ್ಷಗಾನೀಯ ಹಿಮ್ಮೇಳ ಇವುಗಳನ್ನು ನೋಡಿದರೆ ನಮ್ಮ ಯಕ್ಷಗಾನ 'ಕಂಪನಿ ನಾಟಕ'ವಾಗಿ ಎಷ್ಟೋ ಕಾಲವಾಗಿ ಹೋಗಿದೆ.

ಇಂದು ಹಲವು ಯುವ ಕಲಾವಿದರಿಗೆ ಅವರ ಯೋಗ್ಯತೆಗೆ ಮೀರಿದ ಜನಪ್ರಿಯತೆ, ಮಾನ, ಮನ್ನಣೆ ಸಿಗುತ್ತಿದೆ. ಅದಕ್ಕೆ ಅನೇಕ ವ್ಯಾವಹಾರಿಕ ಕಾರಣಗಳಿವೆ. ಆಯಾ ಕಲಾವಿದರು ತಿಳಿದುಕೊಂಡಿದ್ದಾರೆ ತಾವೇನೋ ತುಂಬಾ ದೊಡ್ಡ ಕಲಾವಿದರೆಂದು-ಆದರೆ ಅವರ ಜನಪ್ರಿಯತೆಯ ಗುಟ್ಟು ಬೇರೆಯೇ ಇದೆ. ಕೆಲವು ಮಹಿಳಾ ಕಲಾವಿದೆಯರು ಇಂದು ವೃತ್ತಿ ಮೇಳದಲ್ಲಿ ಜನಪ್ರಿಯರಾಗಿದ್ದಾರೆ. ವಾಸ್ತವವಾಗಿ ಅವರ ಕಲಾ ಪ್ರಸ್ತುತಿ ಇನ್ನೂ ಎಳೆಸೆಂಬುದು ಜನಸಾಮಾನ್ಯ ಪ್ರೇಕ್ಷಕರಿಗೆ ತಿಳಿಯದಂತಹ ಸ್ಥಿತಿಯನ್ನು ಕೆಲವು ಕಲಾವಿದರು ಮತ್ತು ಸಂಘಟಕರು ನಿರ್ಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಯಕ್ಷಗಾನದ ಕುರಿತು ಕೂಡ ಕೆಲವು ಅಸಮಾಧಾನವನ್ನು ವ್ಯಕ್ತಪಡಿಸುವ ಅಗತ್ಯವಿದೆ.

ಇನ್ನೋರ್ವ ಭರವಸೆಯ ವೇಷಗಾರ್ತಿ ಶ್ರೀಮತಿ ಸೌಮ್ಯ ಅರುಣ್
ಇಂದು ಎಲ್ಲ ಕ್ಷೇತ್ರಗಳಂತೆ ಯಕ್ಷಗಾನದಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರಿಗೆ ಸ್ವಾಗತ. ಮಹಿಳೆಯರನ್ನು ಯಾರೂ ನಿಷೇಧಿಸಲು ಸಾದ್ಯವಿಲ್ಲ. ಆದರೆ ಮಹಿಳೆಯರು ಯಕ್ಷಗಾನದ ಒಟ್ಟಾರೆ ಸಾಂಸ್ಕೃತಿಕ ಮಹತ್ವವನ್ನರಿತು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಎಲ್ಲೋ ಒಂದು ಕಡೆ, ಮಹಿಳೆಯರು ಯಕ್ಷಗಾನದ ಬಣ್ಣದ ಬದುಕು ಅಂದರೆ 'ಗ್ಲಾಮರ್'ನಿಂದಿಷ್ಟೇ ಆಕರ್ಷಿತರಾಗಿದ್ದಾರೆಯೇ ಎಂದು ಅನುಮಾನಿಸಲು ಸಾಕಷ್ಟು ಆಧಾರಗಳಿವೆ. ಯಕ್ಷಗಾನದ ವೇಷಗಾರಿಕೆಯೆಂದರೆ ಬಣ್ಣ ಬಣ್ಣದ ವೇಷ ತೊಟ್ಟುಕೊಂಡು ಬಹು ಬೇಗನೆ ಜನರ ಗಮನವನ್ನು ಸೆಳೆಯಬಹುದಾದ ವಿಭಾಗ. ಉಳಿದ ವಿಭಾಗಗಳಲ್ಲಿ 'ಕಾಣಿಸಿಕೊಳ್ಳುವುದು' ಕಷ್ಟ.

ಹಿಮ್ಮೇಳಗಳಲ್ಲೂ ಮಿ೦ಚುತ್ತಿರುವ ಮಹಿಳೆಯರು

ಉದಾಹರಣೆಗೆ ಒಂದೇ ಒಂದು ಪ್ರದರ್ಶನಕ್ಕೆ ಬೇಕಾದ ಕುಣಿತ ಮತ್ತು ಮಾತನ್ನು ಬಲ್ಲವರ ಮಾರ್ಗದರ್ಶನದಲ್ಲಿ ರೂಢಿಸಿಕೊಂಡು, ಬೇರೆಯವರ ಸಹಾಯದಿಂದ ವೇಷಭೂಷಣ ತೊಟ್ಟುಕೊಂಡು ಒಂದು ವೇಷ ಮಾಡಿದಂತೆ ಭಾಗವತಿಕೆಯನ್ನಾಗಲೀ ಮದ್ದಳೆಗಾರಿಕೆಯನ್ನಾಗಲೀ, ಚಂಡೆವಾದನವನ್ನಾಗಲೀ ಒಂದೇ ಒಂದು ಪ್ರದರ್ಶನಕ್ಕಾಗಿ ರೂಢಿಸಿಕೊಳ್ಳಲು ಸಾಧ್ಯವಿಲ್ಲ. ಇಂದು ವೇಷ ಮಾಡಲು ತೋರಿದ ಉತ್ಸಾಹವನ್ನು ಮಹಿಳೆಯರು ಭಾಗವತಿಕೆಯನ್ನು ಮಾಡಲು ಚಂಡೆ ಮದ್ದಳೆಯನ್ನು ನುಡಿಸಲು ತೋರಿಸುತ್ತಿಲ್ಲ. ಈ ಕಾರಣಕ್ಕಾಗಿಯೇ ರಂಗದಲ್ಲಿ ಸ್ವಲ್ಪ ಪ್ರಮಾಣದ ಅಸಮತೋಲನ ಕಾಣುತ್ತಿದೆ.

ಮಹಿಳಾ ಭಾಗವತರು ಸ್ತ್ರೀ ಸಹಜವಾದ ಶೃತಿಯಲ್ಲಿ ಪದ್ಯ ಹೇಳಿದರೆ ಮುಂದೆ ಕುಣಿಯುವ ಮಹಿಳಾ ಕಲಾವಿದೆಗೆ ಶೃತಿ ಬದ್ಧವಾಗಿ ಮಾತನಾಡುವುದು ಸುಲಭವಾಗುತ್ತದೆ. ಆದ್ದರಿಂದ ಸುಲಭದಲ್ಲಿ ಅಂದರೆ ಕಡಿಮೆ ಪರಿಶ್ರಮದಲ್ಲಿ 'ಕಾಣಿಸಿಕೊಳ್ಳಲು' ಸಾಧ್ಯವಿರುವ ವೇಷಗಾರಿಯನ್ನಷ್ಟೇ ಅಲ್ಲದೆ ಜವಾಬ್ದಾರಿಯ ಭಾಗವತಿಕೆ ಮದ್ದಳೆ ಚಂಡೆ ವಾದನದ ಕಡೆಗೂ ತರುಣಿಯರು ಹೆಚ್ಚು ಆಕರ್ಷಿತರಾಗಬೇಕು. ಇದು ಸಾಧ್ಯವಿದೆ ಎಂಬುದನ್ನು ತೆಂಕಿನ ಶ್ರೀಮತಿ ಲೀಲಾವತಿ ಬೈಪಡಿತ್ತಾಯ ಮತ್ತು ಇತ್ತೀಚೆಗೆ ಭವ್ಯಶ್ರೀ ರೈ ಮಂಡೆಕೋಲು ಇವರು ತೋರಿಸಿಕೊಟ್ಟಿದ್ದಾರೆ. ಬಡಗಿನಲ್ಲಿ ಅದೇಕೋ ಮಹಿಳೆಯರು ಬಣ್ಣದ ಲೋಕದಿಂದಷ್ಟೇ ಆಕರ್ಷಿತರಾಗುತ್ತಿರುವುದು ಅಷ್ಟೇನೂ ಒಳ್ಳೆಯ ಬೆಳವಣಿಗೆಯಲ್ಲ.

ಮಹಿಳೆಯೊಬ್ಬಳು ಯಕ್ಷಗಾನದಂತಹ ನಿಷಾಚರ ವೃತ್ತಿಯಲ್ಲಿ ಮುಂದುವರಿಯುವುದು ಕಷ್ಟಸಾಧ್ಯ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಹವ್ಯಾಸೀ ಮಟ್ಟದಲ್ಲಿ ಮಹಿಳೆಯರಿಗೆ ಅಪಾರವಾದ ಸಾಧ್ಯೆತಗಳಿವೆ ಆದರೆ ಈ ಕುರಿತು ಮಹಿಳೆಯರು ಗಂಭೀರವಾಗಿ ಮನಮಾಡಬೇಕಿದೆ. ಒಂದು ಕಾಲವಿತ್ತು-ಮಹಿಳೆ ಗ್ರಹಿಣಿಯಾದರೆ ಹೊರ ಪ್ರಪಂಚದಲ್ಲಿ ಯಾವುದೇ ರಚನಾತ್ಮಕ ಸಾಹಸಕ್ಕಿಳಿಯಲು ಅವಳಿಗೆ ಮನೆಯವರ ಬೆಂಬಲ ದೊರೆಯುತ್ತಿರಲಿಲ್ಲ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಅಂಥಹದ್ದೇ ಸ್ಥಿತಿಯಿದೆ ಎಂದು ನಾನು ತಿಳಿದಿದ್ದೇನೆ.

ಆದರೆ ನಗರ ಪ್ರದೇಶದಲ್ಲಿ ಉದ್ಯೋಗದಲ್ಲಿರದ ಗ್ರಹಿಣಿಯರಿಗೆ ಗಂಡಂದಿರು ಹಿಂದೆಂದಿಗಿಂತಲೂ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಆಕೆಗೂ ಮಕ್ಕಳನ್ನು ಶಾಲೆಗೆ ಕಳುಹಿಸಿ ಗಂಡನನ್ನು ಕಛೇರಿಗೆ ಕಳುಹಿಸಿದ ಮೇಲೆ ಹೆಚ್ಚಿನ ಸಮಯಾವಕಾಶವಿದೆ. ಈ ಸಮಯಾವಕಾಶವನ್ನು ಅಂಥ ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕಿದೆ. ಯಕ್ಷಗಾನದ ಪ್ರಸಂಗಗಳ ಅಧ್ಯಯಶೀಲತೆ, ಭಾಷೆಯ ಕುರಿತು ಹೆಚ್ಚಿನ ಪರಿಣತಿ, ಯಕ್ಷಗಾನದ ಅಂಗೋಪಾಂಗಗಳ ಕುರಿತು ಹೆಚ್ಚಿನ ಜ್ಞಾನವನ್ನು ಬೆಳೆಸಿಕೊಳ್ಳುವುದಕ್ಕೆ ಅವರು ಗಂಭೀರವಾಗಿ ಪ್ರಯತ್ನಿಸಬೇಕಾಗಿದೆ. ಮಹಿಳೆಯರು ಕೇವಲ ಪ್ರದರ್ಶನಾವಕಾಶಕ್ಕಾಗಿ ಎದುರು ನೋಡದೇ ಸಿಕ್ಕ ಸೀಮಿತ ಅವಕಾಶದಲ್ಲಿ ತಮ್ಮ ಸಾಮಥ್ರ್ಯವನ್ನು ನಿರೂಪಿಸಲು ಪ್ರಯತ್ನಶೀಲರಾಗಬೇಕಿದೆ. ಯಕ್ಷಗಾನವೆಂದರೆ ಕೇವಲ ಕುಣಿಯವುದು ಎಂಬ ಭ್ರಮೆ ಮಹಿಳೆಯರು, ಮಕ್ಕಳು ಮತ್ತು ಹವ್ಯಾಸಿಗಳಲ್ಲಿದೆ.

ಕೊ೦ಡದಕುಳಿ ರಾಮಚ೦ದ್ರ ಹೆಗ್ಡೆಯವರ ಪುತ್ರಿ ಆಶ್ವಿನಿ ಕೊ೦ಡದಕುಳಿ
ಆದರೆ ಯಕ್ಷಗಾನದಲ್ಲಿ ಎಲ್ಲವೂ ಇದೆ. ಮುಖ್ಯವಾಗಿ ಮಾತಿನ ವಿಭಾಗವನ್ನು ಮಹಿಳೆಯವರು ನಿರ್ಲಕ್ಷಿಸುವುದನ್ನು ಮಹಿಳೆಯರ ಸಂಭಾಷಣೆಯಲ್ಲಿ ನಾವು ಗುರುತಿಸಬಹುದು. ಯಕ್ಷಗಾನದ ಕುರಿತು ಎಲ್ಲೆಂದರಲ್ಲಿ ಹೋಗಿ ಕುಣಿಯುವ ಮಹಿಳಾ ಕಲಾವಿದರು ತಾಳಮದ್ದಳೆಯ ಕುರಿತು ಆಸಕ್ತಿ ತೋರಿಸದೇ ಇರುವಲ್ಲಿ ಅವರ ಈ ದೌರ್ಬಲ್ಯ ವ್ಯಕ್ತವಾಗುತ್ತಿದೆ. ಮಹಿಳಾ ಕಲಾವಿದೆಯರು ತಾಳಮದ್ದಳೆಯ ಕುರಿತು ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕಿದೆ. ಇದರಿಂದ ಹಲವು ಪ್ರಸಂಗಗಳ ಗಂಭೀರ ಪಾತ್ರಗಳ ಚಿತ್ರಣದ ಸೂಕ್ಷ್ಮದ ಅರಿವಾಗುತ್ತದೆ; ಭಾಷೆಯ ಮೇಲೆ ಹಿಡಿತ ಸಾಧ್ಯವಾಗಿ ಯಾವುದೇ ಪ್ರಸಂಗದಲ್ಲಿ ಯಾವುದೇ ವೇಷಧಾರಿಗಳ ಜೊತೆ ಮಾತನಾಡುವ ಆತ್ಮವಿಶ್ವಾಸ ಬೆಳೆಯುತ್ತದೆ. ತಾಳಮದ್ದಳೆ ಕ್ಷೇತ್ರದಲ್ಲಿ ಮಹಿಳೆಯರು ಮುಂದುವರಿಯದಿದ್ದರೂ ತಾಳಮದ್ದಳೆ ಇಂದಿಗೂ ಒಂದು ತರಬೇತಿ ರಂಗಭೂಮಿ ಎಂಬ ಅಂಶವನ್ನು ಅವರು ನಿರ್ಲಕ್ಷಿಸುತ್ತಾ ಬಂದಿರುವುದು ದುರದೃಷ್ಟಕರ.

ಯಕ್ಷಗಾನದಲ್ಲಿ ಮಹಿಳೆಯರು ಭಾಗವಹಿಸುವುದರಿಂದ ಪ್ರಯೋಜನವಿದೆ. ಆದರೆ ಸ್ತ್ರೀಯರೇ ಸ್ತ್ರೀ ವೇಷ ನಿರ್ವಹಿಸುವುದರಿಂದ ಯಕ್ಷಗಾನದ ಒಂದು ವಿಭಾಗಕ್ಕೆ ಅಪಾಯವಿದೆ. ಸ್ತ್ರೀಯರನ್ನು ನಾಚಿಸುವಂತೆ ಪುರುಷರೇ ಸ್ತ್ರೀ ವೇಷವನ್ನು ನಿರ್ವಹಿಸುವ ಅಪರೂಪದ ಕಸುಬು ವಿಶ್ವದ ಕೆಲವೇ ರಂಗಭೂಮಿಯಲ್ಲಿ ಉಳಿದುಕೊಂಡು ಬಂದಿದೆ. ಅದರಲ್ಲಿ ಯಕ್ಷಗಾನವೂ ಒಂದು ಎಂಬುದು ಗಮನಾರ್ಹ. ಕಥಕ್ಕಳಿ, ಕೂಚಿಪುಡಿ, ಯಕ್ಷಗಾನ ಇವುಗಳಲ್ಲಿ ಮಾತ್ರ ಸ್ತ್ರೀ ವೇಷದ ಕಸುಬು ಗಟ್ಟಿಯಾಗಿ ಬೇರೂರಿದೆ. ಇದು ದೀರ್ಘ ಕಾಲದ ಸೃಜನಶೀಲ ಕಲಾವಿದರ ಶ್ರಮ ಮತ್ತು ಕೊಡುಗೆಯಿಂದ ಮಾತ್ರ ಉಳಿದುಬರಬಹುದಾದ ಒಂದು ಕಸುಬು. ಸ್ತ್ರೀಯರೇ ಸ್ತ್ರೀ ಪಾತ್ರವನ್ನು ನಿರ್ವಹಿಸುವ ಪರಿಪಾಠ ಮುಂದುವರಿದರೆ ಈ ಕಸುಬು ಕ್ರಮೇಣ ಮಾಯವಾಗುತ್ತದೆ.

ಸ್ತ್ರೀಯೊಬ್ಬಳು ಸ್ತ್ರೀ ಪಾತ್ರ ಮಾಡಿದರೆ ಅವಳ ದೇಹವು ಅವಳಿಗೆ ಅನುಕೂಲವನ್ನು ಒದಗಿಸುವುದರಿಂದ ಪ್ರಾರಂಭದಲ್ಲಿ ಸುಲಭವಾಗಿ ಅವಳು ಪುರುಷ ಸ್ತ್ರೀ ವೇಷಧಾರಿಗಳಿಗೆ ಸ್ಪರ್ಧೆಯನ್ನು ನೀಡಬಲ್ಲಳು. ಅವಳ ವೈಯಕ್ತಿಕ ದೇಹಸಿರಿಯ ದೆಸೆಯಿಂದ ಪ್ರೆಕ್ಷಕರೂ ಸುಲಭವಾಗಿ ಮರುಳಾಗಬಹುದು. ಇದರಿಂದ ಕ್ರಮೇಣ ಪುರುಷರು ಸ್ತ್ರೀ ಪಾತ್ರಧಾರಿಗಳಾಗಲು ಹಿಂದೆಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನೀವು ಕೇಳಬಹುದು ಸಿನಿಮಾ, ನಾಟಕಗಳಲ್ಲಿ ಸ್ತ್ರೀಯರೇ ಸ್ತ್ರೀ ವೇಷ ಮಾಡುತ್ತಾರಲ್ಲ? ಎಂದು ಆದರೆ ಸ್ವರೂಪದಲ್ಲಿ ಯಕ್ಷಗಾನವು ಪ್ರತ್ಯೇಕವಾಗಿ ನಿಲ್ಲುತ್ತದೆ.

ಯಕ್ಷಗಾನವು ಒಂದು ಶೈಲೀಕೃತ (ಶೈಲೀಕೃತ ರಂಗಭೂಮಿ ಎಂದರೇನು-ಇದು ತುಂಬ ಸೂಕ್ಷ್ಮವಾದ ಸಂಗತಿಯಾದ್ದರಿಂದ ಹೆಚ್ಚಿನ ವಿವರದ ಅಗತ್ಯವಿದೆಯದರೂ ಇಲ್ಲಿ ಅದಕ್ಕ ಅವಕಾಶ ಕಡಿಮೆ ಇದೆ) ರಂಗಭೂಮಿಯಾದ್ದರಿಂದ ಕಾವ್ಯದ ಕವಿಸಮಯಗಳನ್ನು ನೃತ್ಯ ಅಭಿನಯಗಳಲ್ಲಿ ತೋರಿಸುವ ಸಂದರ್ಭವಿರುತ್ತದೆ. ಉದಾಹರಣೆಗೆ ಸಿನಿಮಾದಲ್ಲಿ ಗಂಡು ಹೆಣ್ಣನ್ನು ಆಲಿಂಗಿಸುವ ಸನ್ನಿವೇಶವಿರಬಹುದು-ಆದರೆ ಹೆಣ್ಣಿನ ಅಂಗಾಂಗಗಳನ್ನು ಅವಳಲ್ಲಿಯೇ ಅವಳ ಎದುರೇ ಹಸ್ತಾಭಿನಯದಿಂದ ತೊರಿಸಲೇಬೇಕಾದ ಅನಿವಾರ್ಯತೆ ಇರುವುದಿಲ್ಲ. ಉದಾಹರಣೆಗೆ 'ಕಂಡ ಕಲಾಧರನು ಮೋಹನೆಯನು ಕಂಡ ಕಲಾಧರನು | ಕಂಡತಂಗದಿರ ಮಂಡಲವ ಮೀರ್ವದೊ ಎಂಬ ದುಂಡುಕುಚೆಯ ಮುಖದಂದವ ನೀಕ್ಷಿಸಿ ||' ಈ ಪದ್ಯದಲ್ಲಿ ಹೆಣ್ಣಿನ ಅಂಗಗಳ ವರ್ಣನೆಯಿದೆ. ಇಂತಹ ಸನ್ನಿವೇಶದಲ್ಲಿ ಮುಜುಗರ ಸಾಮಾನ್ಯವಾಗುತ್ತದೆ.

ಅದೇನೇ ಇದ್ದರೂ ಪುರುಷ ಪಾತ್ರಗಳನ್ನು ಮಾಡಲು ಮಹಿಳೆಯರಿಗೆ ಅವಕಾಶವಿರುವುದರಿಂದ ಈ ವಿಭಾಗದಲ್ಲಿ ಮಹಿಳೆಯರು ಉತ್ಸಾಹ ತೋರದಿದ್ದರೆ ಯಕ್ಷಗಾನದ ಶತಮಾನಗಳ ಸ್ತ್ರೀವೇಷಗಾರಿಕೆಯ ಕಸುಬು ಉಳಿದುಕೊಳ್ಳುತ್ತದೆ. ಮಹಿಳೆಯೇ ಸ್ತ್ರೀ ವೇಷ ಮಾಡುವಾಗ ಆಗಲೇ ಹೇಳಿದಂತೆ ಅವಳ ಕಲಾಪ್ರಸ್ತುತಿಗಿಂತ ಅವಳ ವೈಯಕ್ತಿಕ ಅಂಗಸೌಷ್ಠವವೇ ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ ಮತ್ತು ನಿಜವಾಗಿ ಏನು ಅಭಿನಯ ಮಾಡಿದಳು ಎಂಬುದು ಕೆಲವೊಮ್ಮೆ ಗೌಣವಾಗುತ್ತದೆ.

ಮಹಿಳೆಯರು ಮೇಳಗಳಲ್ಲಿ ಮುಕ್ತವಾಗಿ ಭಾಗವಹಿಸುವುದರಿಂದ ವ್ಯಾವಹಾರಿಕವಾದ ಸಮಸ್ಯೆಗಳು ಈಗಾಗಲೇ ತಲೆದೋರಿದೆ. ಯಕ್ಷಗಾನ ಕಲಾವಿದರಲ್ಲಿರುವ ಚೌಕಿಯ ಗುಂಪುಗಾರಿಕೆ ಇನ್ನೂ ಹೆಚ್ಚು ಅಪಾಯಕಾರೀ ಹಂತಕ್ಕೆ ತಲುಪಲು ವೃತ್ತಿ ಮೇಳಗಳಲ್ಲಿ ಪದೇ ಪದೇ ಅತಿಥಿಗಳಾಗಿ ಭಾಗವಹಿಸುವ ಕಲಾವಿದೆಯರ ಪಾಲು ಹೆಚ್ಚಿದೆಯೆಂದು ಪಾಪದ ಹಲವು ಕಲಾವಿದರು ಇಂದು ಖಾಸಗಿಯಾಗಿ ದೂರುತ್ತಿದ್ದಾರೆ. ಏನೇ ಆದರೂ ಮಹಿಳೆಯರು ಯಕ್ಷಗಾನಕ್ಕೆ ಬೇಕು ಅವರ ಪ್ರವೇಶದಿಂದಾದ ಗೊಂದಲ ಪರಿಹಾರಕ್ಕೆ ಕೂಡ ಸಾಕಷ್ಟು ಸಮಯ ಬೇಕು. ಕ್ರಮೇಣ ಹೊಂದಾಣಿಕೆ ಸಾಧ್ಯವಾಗದೇ ಇರುವುದಿಲ್ಲ.

ಒಂದು ಮಾತಿದೆ- 'ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ' ಹಾಗೆಯೇ 'ಮಹಿಳೆಯೊಬ್ಬಳು ಕುಣಿದರೆ ಮೇಳವೊಂದು ತೆರೆದಂತೆ' ಎಂದುಕೊಳ್ಳೋಣ

****************


ಚಿತ್ರ ಕೃಪೆ : ರಾಮ್ ನರೇಶ್ ಮ೦ಚಿ, ಕಿರಣ ವಿಟ್ಲ, ಸ೦ತೋಷ್ ವೈದ್ಯ ಹಾಗೂ ಅ೦ತರ್ಜಾಲದ ಅನಾಮಿಕ ಮಿತ್ರರು

ಲೇಖಕರು ``ಯಕ್ಷರಂಗ`` ಮಾಸಪತ್ರಿಕೆಯ ಸಂಪಾದಕರು


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ